Wednesday, 11 December 2024

 


ದಿನಾಂಕ: 02/12/2024

2023-2024 ರ ನಡುವೆ ಕರ್ನಾಟಕದ ಜಿಲ್ಲೆಗಳಲ್ಲಿ ತಾಯಂದಿರ ಸಾವಿನ ಕುರಿತು ವಿವರಗಳು - ತನಿಖೆ ಅಗತ್ಯವಿದೆ

 

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ತಾಯಂದಿರ ಸಾವು ಕಂಡುಬಂದಿರುವುದು ಆಘಾತಕಾರಿಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಈ ಕುರಿತು ತನಿಖೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಒಂದಷ್ಟು ಕ್ರಮ ಕೈಗೊಳ್ಳುತ್ತಿದ್ದು, ಅದಕ್ಕಾಗಿ ತಜ್ಞರ ಸಮಿತಿ ರಚಿಸಿರುವುದು ಒಳ್ಳೆಯದು. ಈ ಸಮಸ್ಯೆ ಈಗ ಗಮನ ಸೆಳೆದಿದ್ದರೂ, ಈ ಘಟನೆಗಳು ಕೇವಲ ನವೆಂಬರ್ 2024 ಮತ್ತು ಬಳ್ಳಾರಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಬಳ್ಳಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರದೃಷ್ಟಕರ ತಾಯಿಯ ಮರಣಗಳ ಜೊತೆಗೆ ಈ ವರ್ಷದ ಆರಂಭದಲ್ಲಿ ಮತ್ತು ಹಿಂದಿನ ವರ್ಷ (2023) ಇತರ ಜಿಲ್ಲೆಗಳಲ್ಲಿ ಸಂಭವಿಸಿದ ಸಾವಿನ ಕೆಲವು ವಿವರಗಳು ಇಲ್ಲಿವೆ. (ವಿವಿಧ ಆಸ್ಪತ್ರೆಯ ಮತ್ತು ಜಿಲ್ಲಾ ಔಷಧ ಉಗ್ರಾಣದ ಆರೋಗ್ಯ ಕಾರ್ಯಕರ್ತರೊಂದಿಗೆ ಅನೌಪಚಾರಿಕ ಸಂಭಾಷಣೆ ನಡೆಸುವ ಮೂಲಕ ಸಂಗ್ರಹಿಸಲಾಗಿದೆ)

 

  1. ದಾವಣಗೆರೆ ಜಿಲ್ಲಾ ಆಸ್ಪತ್ರೆ (ಚಿಗಟೇರಿ ಆಸ್ಪತ್ರೆ) - ಫೆಬ್ರವರಿ 2024 ರಲ್ಲಿ 5 ತಾಯಂದಿರ ಸಿಸೇರಿಯಂ ನಂತರ ಕಿಡ್ನಿ ತೀವ್ರ ತೊಂದರೆಯಿಂದ (AKI) ಮತ್ತು ಕಡಿಮೆಯಾದ ಮೂತ್ರ ವಿಸರ್ಜನೆಯಿಂದಾಗಿ ಸಾವನ್ನಪ್ಪಿದ್ದಾರೆ. ಇದು ಕಳಪೆ ರಿಂಗರ್ ಲ್ಯಾಕ್ಟೇಟ್ (RL) ದ್ರಾವಣದ ಕಾರಣದಿಂದಾಗಿರಬಹುದು ಎಂಬ ಮಾತು ಇತ್ತು.
  2. ಮಹಿಳೆಯೊಬ್ಬರು (ದಾವಣಗೆರೆ ಜಿಲ್ಲೆಯವರು) ದಾವಣಗೆರೆ ಆಸ್ಪತ್ರೆಯಲ್ಲಿ ಡಿಸೆಂಬರ್ 2023 ರಲ್ಲಿ ಅಥವಾ ಜನವರಿ 2024 ರ ಆರಂಭದಲ್ಲಿ ಚಿಗಟೇರಿ ಆಸ್ಪತ್ರೆಯಲ್ಲಿ ಕಿಡ್ನಿ ತೀವ್ರ ತೊಂದರೆ (AKI) ಕಾರಣದಿಂದಾಗಿ ನಿಧನರಾದರು.  ಇಲ್ಲದಿದ್ದರೆ ಅವರು ಗರ್ಬಿಣಿ ಸಮಯದಲ್ಲಿ ಏನು ತೊಂದರೆ ಇರಲಿಲ್ಲ ಮತ್ತು ಉತ್ತಮ ಪ್ರಸವಪೂರ್ವ ಆರೈಕೆಯನ್ನು ಪಡೆದಿದ್ದರು - ನವೆಂಬರ್, 2023 ರಲ್ಲಿ ಸಿಸೇರಿಯಂ ಮೂಲಕ ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲಾಯಿತು (ಕಳೆದ ವರ್ಷ). ಹೆರಿಗೆ ಆದ 3ನೆ ದಿನ ಮೂತ್ರ ಸಮಸ್ಯೆ ಆಗಿ ಅನೇಕ ಆಸ್ಪತ್ರೆಗಳಿಗೆ ರೆಫರಲ್‌ಗಳು ಮತ್ತು ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಬಂತು. ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲೂ ದಾಖಲಾಗಿದ್ದರು.  ನಂತರ ಪ್ರಾಣ ಕಳೆದುಕೊಂಡರು. ಸುಮಾರು 2.5-3 ಲಕ್ಷ ಖರ್ಚು ಮಾಡಬೇಕಾಗಿ ನವಜಾತ ಶಿಶುವಿಗೆ ಫಾರ್ಮುಲಾ ಹಾಲು ಖರೀದಿಸಲು ಸಹ ಸಾಕಷ್ಟು ಹಣವಿಲ್ಲದೆ ಕುಟುಂಬವು ತೀವ್ರ ಬಡತನಕ್ಕೆ ತಳ್ಳಲಾಗಿದೆ.
  3. 2024 ರ ಫೆಬ್ರುವರಿ/ಮಾರ್ಚ್ ಅವಧಿಯಲ್ಲಿ ಚಿತ್ರದುರ್ಗ ಹಾಗೂ ಇತರ ಜಿಲ್ಲೆಗಳಲ್ಲಿ ಕಳಪೆಮಟ್ಟದ ಆರ್‌ಎಲ್ ಅಥವಾ ಆರ್‌ಎಲ್‌ನ ಮಾಲಿನ್ಯದಿಂದಾಗಿ (ಫಂಗಲ್) ಇದೇ ರೀತಿಯ ಸಾವುಗಳು ದಾಖಲಾಗುತ್ತಿವೆ ಎಂದು ಕೆಲವು ಆರೋಗ್ಯ ಕಾರ್ಯಕರ್ತರು ಹೇಳಿದ್ದಾರೆ.
  4. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ 7 ತಿಂಗಳಿಂದ ಅಧಿಕ ತಾಯಂದಿರ ಮರಣಗಳ (28 ತಾಯಂದಿರ ಮರಣ ಮತ್ತು 135 ಶಿಶು ಮರಣ) ಬಗ್ಗೆ ಇತ್ತೀಚಿನ ಪತ್ರಿಕೆಯ ಲೇಖನ ವರದಿ ಮಾಡಿದೆ. 
  5. ದಾವಣಗೆರೆಯ ಜಿಲ್ಲಾ ಔಷಧ ಉಗ್ರಾಣದ ಸಿಬ್ಬಂದಿ - ಮಾರ್ಚ್ 2024 ರಲ್ಲಿ ಗುಣಮಟ್ಟದ ಸಮಸ್ಯೆ ಇದೆ ಎಂದು ತಿಳಿಸಿದರು (ಗುಣಮಟ್ಟದ ಪರೀಕ್ಷೆಯು RL ಅನ್ನು "ಗುಣಮಟ್ಟವಲ್ಲ" ಎಂದು ತೋರಿಸಿದೆ ಅನ್ನೋ ಮಾಹಿತಿ ಹೇಳಿದರು). ಇದು RL ದ್ರವಗಳ ಸಾರಬರಾಜನ್ನು ನಿಲ್ಲಿಸುವ ನಿರ್ಧಾರವನ್ನು ಪ್ರೇರೇಪಿಸಿತು. ಕಳಪೆ ಬ್ಯಾಚ್‌ನ ಬಳಕೆಯನ್ನು ಎಲ್ಲಾ ಕೇಂದ್ರಗಳಲ್ಲಿ ನಿಲ್ಲಿಸುವಂತೆ ಹೇಳಲಾಯಿತು ಮತ್ತು ಹೊಸ ಬ್ಯಾಚ್ ಇನ್ನೂ ಏಪ್ರಿಲ್‌ನಲ್ಲಿ ಬರುವುದು ಬಾಕಿಯಿತ್ತು. ಕೇಂದ್ರಗಳಿಂದ ಕಳಪೆ ಬ್ಯಾಚ್‌ನ RL ಮರುಪಡೆಯುವಿಕೆ ಇನ್ನೂ ಏಪ್ರಿಲ್‌ನಲ್ಲಿ ಮಾಡಿರಲಿಲ್ಲ.
  6. ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ - ಎಲ್ಲಾ ಮಹಿಳೆಯರು ಟ್ಯೂಬೆಕ್ಟಮಿ ನಂತರ ಔಷಧ ಸಂಬಂದಿಸಿದಂತೆ ಸಮಸ್ಯೆ ಅನುಭವಿಸುತ್ತಿದ್ದರಿಂದ 2024 ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಇದನ್ನು ಗಮನಿಸಿ ಟ್ಯೂಬೆಕ್ಟಮಿಯನ್ನು ವಿರಾಮಗೊಳಿಸಲಾಯಿತು.

 

ಇದರಿಂದ ಮೂಡುವ ಪ್ರಶ್ನೆಗಳೆಂದರೆ-

  1. ಈ ಕಳಪೆ RL/ಔಷಧಗಳು ಕರ್ನಾಟಕದ ಜಿಲ್ಲೆಗಳಾದ್ಯಂತ ಯಾವಾಗಿನಿಂದ ಸಾವುಗಳಿಗೆ ಮತ್ತು ಇತರೆ ಪರಿಣಾಮಗಳಿಗೆ ಕಾರಣವಾಗುತ್ತಿರುವುದು? - ನವೆಂಬರ್ 2023 ರ ಸಮಯದಲ್ಲಿ ಮೇಲಿನ ಕೆಲವು ಸಾವುಗಳು ಸಂಭವಿಸಿರುವುದರಿಂದ ಮತ್ತು ಇತರ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನವುಗಳು ಇರುವ ಸಾಧ್ಯತೆ ಇರುವುದರಿಂದ ಕಳೆದ ವರ್ಷದಿಂದ ತನಿಖೆಯ ಅಗತ್ಯವಿದೆ. 2023 ರಿಂದ ಜಿಲ್ಲೆಗಳಾದ್ಯಂತ ಎಲ್ಲಾ ಸರ್ಕಾರಿ ಸೌಲಭ್ಯಗಳಲ್ಲಿ ಸಾವುಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾಗಿದೆ.
    1. ಜಿಲ್ಲೆಗಳಾದ್ಯಂತ ತಾಯಂದಿರ ಮರಣಗಳು 2023 ಇಂದ 2024 ನವೆಂಬರ್ ರವರೆಗೆ
    2. ಜಿಲ್ಲೆಗಳಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳು ಮತ್ತು ಮರಣ ಹೊಂದಿದವರು - ತೀವ್ರ ಮೂತ್ರಪಿಂಡದ/ಕಿಡ್ನೀ ಸಾಮಸ್ಯೆ ಇಂದ, ಅನಾಫಿಲ್ಯಾಕ್ಸಿಸ್ / ಡ್ರಗ್ ಅಲೆರ್ಜೀಗಳಿಂದ, ಸೆಪ್ಸಿಸ್, ಸೆಪ್ಟಿಕ್ ಶಾಕ್, ಎಂಡೋಕಾರ್ಡಿಟಿಸ್ / ಹೃದಯ ವೈಫಲ್ಯ ಇತ್ಯಾದಿಗಳು - ವಿಶೇಷವಾಗಿ ಯುವ / ಅನಿರೀಕ್ಷಿತವಾಗಿದ್ದರೆ - ಈ ಮರಣಗಳನ್ನು ಪರಿಶೀಲಿಸಬೇಕಾಗಿದೆ.
    3. ಈ ತಿಂಗಳುಗಳಲ್ಲಿ ಜಿಲ್ಲೆಗಳಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಲ್ಲಿ  ಯಾರು ಯಾರಿಗೆ RL ನೀಡಲಾಗಿತ್ತು ಅವರ ಆರೋಗ್ಯ ಫಲಿತಾಂಶಗಳು ಹೇಗಿವೆ ಎನ್ನುವುದನ್ನು ಮೌಲ್ಯಮಾಪನ ಮಾಡಬೇಕಾಗಿದೆ
  2. RL ನ ಬ್ಯಾಚ್‌ಗಳ ವಿತರಣೆಯ ಮೊದಲು ಮಾಡೋಬದಲು ಔಷಧದ ಗುಣಮಟ್ಟ ಪರೀಕ್ಷೆಯನ್ನು ಸಮಸ್ಯೆ ಸಂಭವಿಸಿದ ನಂತರ ಏಕೆ ಮಾಡಲಾಯಿತು? ಗುಣಮಟ್ಟ ಪರೀಕ್ಷೆಯು ಕೆಎಸ್‌ಎಂಎಸ್‌ಸಿಎಲ್‌ ನಿಂದ ಔಷಧ ಸಂಗ್ರಹಣೆಯ ಪ್ರೋಟೋಕಾಲ್‌ನ ಭಾಗವಾಗಿಲ್ಲವೇ? ಒಂದುವೇಳೆ ಗುಣಮಟ್ಟದ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಮೊದಲೇ ಮಾಡಿದ್ದರೆ, ಈ ಬ್ಯಾಚ್ ಪ್ರಕ್ರಿಯೆಯ ಮೂಲಕ ಹೇಗೆ ಬಂದಿತು? ಇದು ರೋಗಿಗಳ ಸುರಕ್ಷತೆ ಮತ್ತು ಹೊಣೆಗಾರಿಕೆಯ ಆಳವಾದ ಉಲ್ಲಂಘನೆಯಾಗಿದೆ.
  3. ಕೆಎಸ್‌ಎಂಎಸ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, "ಎರಡು ಅಥವಾ ಎರಡಕ್ಕಿಂತ ಹೆಚ್ಚು ಬ್ಯಾಚ್‌ಗಳು/ಉತ್ಪನ್ನಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದರೆ, ಅಂತಹ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ". ಕಂಪನಿಯನ್ನು 22/03/2024 ರಂದು ಕಪ್ಪುಪಟ್ಟಿಗೆ ಸೇರಿಸಲಾಗಿದ್ದರೂ, ಹೈಕೋರ್ಟ್ 04/04/2024 ರಂದು ಈ ಆದೇಶಕ್ಕೆ ಸ್ಟೇ ಆರ್ಡರ್ ನೀಡಿತು. ಕಪ್ಪುಪಟ್ಟಿ ಮಾಡುವ ಪ್ರೋಟೋಕಾಲ್‌ಗಳನ್ನು ಅನುಸರಿಸುವಲ್ಲಿ ಕೆಎಸ್‌ಎಂಎಸ್‌ಸಿಎಲ್‌ ನಲ್ಲಿನ ಲೋಪದಿಂದಾಗಿ ಇದು ಸಂಭವಿಸಿದೆ. ಇದಲ್ಲದೆ, ಅದೇ ಕಂಪನಿಯು ತಯಾರಿಸಿದ RL ನ ವಿತರಣೆ ಮತ್ತು ಬಳಕೆಯನ್ನು ವ್ಯವಸ್ಥೆಯಲ್ಲಿ ಏಕೆ ಮುಂದುವರಿಸಲಾಯಿತು? ವಾಸ್ತವವಾಗಿ ವಿತರಣೆಯ ಮೊದಲು ಗುಣಮಟ್ಟದ ಪರೀಕ್ಷೆಯನ್ನು ಮಾಡಿದ್ದರೆ, ಈ ತಡೆಗಟ್ಟಬಹುದಾದ ಸಾವುಗಳನ್ನು ತಡೆಯಬಹುದಿತ್ತು!
  4. 2024ರ ನವೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆದ ಈ ಘಟನೆಗೆ ಬಲಿಯಾದ ಮಹಿಳೆಯರ ಹಿನ್ನೆಲೆಯಲ್ಲಿ ಪರಿಹಾರದ ಕುರಿತು ಶಾಸಕರು ಮಾತನಾಡಲಾಗಿದೆ. ಆದರೆ ರಾಜ್ಯದಾದ್ಯಂತ ಮತ್ತು ಒಂದು ವರ್ಷದ ಕಾಲಾವಧಿಯಲ್ಲಿ ಇದರಿಂದ ಸಾವನ್ನಪ್ಪಿದ ಎಲ್ಲ ರೋಗಿಗಳ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಬೇಕು.
  5. ಇದಲ್ಲದೆ, RL ಎಂಬುದು ಸಿಸೇರಿಯಂ ಸಮಯದಲ್ಲಿ ಗರ್ಭಿಣಿಯರಿಗೆ ಮಾತ್ರ ನೀಡಲಾಗುವ ದ್ರವವಲ್ಲ, ಇತರ ವಿಧದ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಗೆ, ಹೈಡರೇಷನ್ ಅಗತ್ಯವಿರುವ ರೋಗಿಗಳಿಗೆ ಸಾಮಾನ್ಯವಾಗಿ ಬಳಸುವ ದ್ರವವಾಗಿದೆ. ಆದ್ದರಿಂದ ತಾಯಿಯ ಮರಣವನ್ನು ಹೊರತುಪಡಿಸಿ ಇತರ ಸಾವುಗಳು ಇರುವ ಸಾದ್ಯತೆಗಳು ಖಂಡಿತ ಇದೆ. ಈ ದ್ರವದ ಕಾರಣದಿಂದಾಗಿ ನವೆಂಬರ್ 2023- ನವೆಂಬರ್ 2024 ರ ನಡುವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಜನರಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆಯೇ? ಈ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕಿದೆ.

 

ಈ ಹಂತದಲ್ಲಿ, ಕೆಎಸ್‌ಎಂಎಸ್‌ಸಿಎಲ್‌ ನಿಂದ ಒಟ್ಟಾರೆ ಎದ್ದುಕಾಣುವ ಕೊರತೆಗಳು ಮತ್ತು ಕರ್ತವ್ಯ ಲೋಪವನ್ನು ವರ್ಣಿಸಲು ಬಯಸುತ್ತೇವೆ -

        ಕೊನೆಯ ವಾರ್ಷಿಕ ಇಂಡೆಂಟಿಂಗ್ ಮತ್ತು ಟೆಂಡರ್ ಪ್ರಕ್ರಿಯೆಯನ್ನು 2021 ರಲ್ಲಿ ಮಾಡಲಾಯಿತು ಮತ್ತು ನಂತರ ನಡೆದಿಲ್ಲ.

        ಈ ಕಾರಣದಿಂದಾಗಿ - ಕೋವಿಡ್ ನಂತರದ ಔಷಧ ಅಗತ್ಯದಲ್ಲಿ ಗಮನಾರ್ಹ ಹೆಚ್ಚಳ ಆಗಿದ್ದರೂ, ರಾಜ್ಯವು ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತಿಲ್ಲ.

        733 ಔಷಧಿಗಳ (ಪಟ್ಟಿಯ ಪ್ರಕಾರ) ಕೆಎಸ್‌ಎಂಎಸ್‌ಸಿಎಲ್‌ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯತೆಯನ್ನು ನೋಡಿಕೊಳ್ಳುವುದಾಗಿ ಮತ್ತು 1000 ಕ್ಕೆ ವಿಸ್ತರಿಸುವುದಾಗಿ ಭರವಸೆ ನೀಡಿದ್ದರೂ, ಹಲವಾರು ವರ್ಷಗಳಿಂದ, ಕೆಎಸ್‌ಎಂಎಸ್‌ಸಿಎಲ್‌ ಪದೇ ಪದೇ ಭರವಸೆಯನ್ನು ಮುರೆಯುತ್ತಿದೆ ಮತ್ತು ಸುಮಾರು 300-500 ಔಷಧಿಗಳನ್ನು ಮಾತ್ರ ಸಂಗ್ರಹಿಸುತ್ತದೆ. ಅವುಗಳಲ್ಲಿ ತೀವ್ರ ಕೊರತೆಯು ಹೆಚ್ಚಿನ ಸಾರ್ವಜನಿಕ ಸಂಸ್ಥೆಗಳಲ್ಲಿ ವಾಸ್ತವವಾಗಿದೆ. ಹೆಚ್ಚಿನ ಜನರು ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಸಹ ಔಷಧಿಗಳಿಗಾಗಿ ತಮ್ಮ ಜೇಬಿನಿಂದ ಖರ್ಚು ಮಾಡಬೇಕಾಗುತ್ತದೆ. ಸಾರ್ವತ್ರಿಕ ಆರೋಗ್ಯ ಆಂದೋಲನ - ಕರ್ನಾಟಕ ನಡೆಸಿದ ಸಮೀಕ್ಷೆಯು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಒಬ್ಬ ರೋಗಿಯು ಔಷಧಿಗಳಿಗೆ ಸರಾಸರಿ ₹ 433 ಖರ್ಚು ಮಾಡುತ್ತಾರೆ ಎಂಬುದನ್ನು ತೋರಿಸಿದೆ.

        ಕೆಎಸ್‌ಎಂಎಸ್‌ಸಿಎಲ್‌ ವಿವರಿಸಿದ ಗುಣಮಟ್ಟ ನಿಯಂತ್ರಣ ಕ್ರಮಗಳ ಪ್ರಕಾರ, ಔಷಧದ ಬ್ಯಾಚ್‌ನ ರೀಯಾಂಡಮ್ ಸಾಂಪಲ್ ಗಳನ್ನು ಎಂಪನೆಲ್ಡ್ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತದೆ ಆದರೆ ಈ ವರದಿಗಳು ಬಾಕಿ ಇರುವಾಗಲೇ ಬ್ಯಾಚ್ "ಆರೋಗ್ಯ ಸಂಸ್ಥೆಗಳಿಗೆ ನೀಡಲು ಅರ್ಹವಾಗಿದೆ" ಎಂದು ಪರಿಗಣಿಸಲಾಗುವುದು. ವರದಿಯು NSQ - Not  of Standard Quality "ಗುಣಮಟ್ಟವಲ್ಲ" ಎಂದು ಹಿಂತಿರುಗಿದಾಗ ಮಾತ್ರ, ಔಷಧಿಗಳನ್ನು ಫ್ರೀಜ್ ಮಾಡಲಾಗುತ್ತದೆ ಮತ್ತು ಬಳಕೆಯಿಂದ ಹಿಂತೆಗೆದುಕೊಳ್ಳಲಾಗುತ್ತದೆ. ಈ ಪ್ರೋಟೋಕಾಲ್ ಸ್ವತಃ ರೋಗಿಗಳ ಸುರಕ್ಷತೆಯನ್ನು ಹೊಂದಿರುವುದಿಲ್ಲ ಏಕೆಂದರೆ ಈ ಔಷಧಿಯನ್ನು ರಾಜ್ಯದಾದ್ಯಂತ ಸಾವಿರಾರು ಜನರಿಗೆ ಬಳಸಲಾಗುತ್ತದೆ ಮತ್ತು ಅವರನ್ನು ಕಳಪೆ ಗುಣಮಟ್ಟದ ಔಷಧಿಗಳ ಅಪಾಯಕ್ಕೆ ಸಿಲುಕಿಸುತ್ತದೆ.

        ಇದಲ್ಲದೆ ಕೆಎಸ್‌ಎಂಎಸ್‌ಸಿಎಲ್‌ ನಿಂದ ಭ್ರಷ್ಟಾಚಾರದ ವರದಿಗಳು ಹೆಚ್ಚು ಹೆಚ್ಚು ವರ್ಷಗಳಲ್ಲಿ ಕಂಡುಬಂದಿದೆ- ಅನುಮೋದನೆಗಳಿಲ್ಲದೆ ಖರೀದಿಸುವುದು, ಕಪ್ಪುಪಟ್ಟಿಗೆ ಸೇರಿಸಲಾದ ಕಂಪನಿಗಳಿಗೆ ಒಲವು ತೋರುವುದು, ಸರಬರಾಜುಗಳನ್ನು ಬೇರೆಡೆಗೆ ತಿರುಗಿಸುವುದು ಮತ್ತು ಖರೀದಿಯ ಪ್ರತಿ ಹಂತದಲ್ಲೂ ಭ್ರಷ್ಟಾಚಾರ. [1] [2] [3]

        ಇ-ಔಷದ ಸಾಫ್ಟ್‌ವೇರ್ ಮೂಲಕ ಆರೋಗ್ಯ ಸಂಸ್ಥೆಗಳಲ್ಲಿನ ಇಂಡೆಂಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಮೂಲಕ ಲಭ್ಯವಿರುವುದನ್ನು ಮಾತ್ರ ಇಂಡೆಂಟ್ ಮಾಡಬಹುದು ಹೊರೆತು ಸಂಸ್ಥೆಗಳು ನಿಜವಾಗಿ ಅಗತ್ಯವಿರುವುದಕ್ಕೆ ತಕ್ಕಂತೆ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಸಂಸ್ಥೆಗಳು ಎದುರಿಸುತ್ತಿರುವ ಪೂರೈಕೆಯಲ್ಲಿನ ನೈಜ ಕೊರತೆಗಳನ್ನು ಮರೆಮಾಡುತ್ತದೆ.

        ಟೆಂಡರ್, ಸಂಗ್ರಹಣೆ, ಗುಣಮಟ್ಟ ಪರೀಕ್ಷೆ, ಬೆಲೆ ನಿಗದಿ, ಕಪ್ಪು ಪಟ್ಟಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಾರ್ವಜನಿಕರಿಗೆ ಮಾಹಿತಿಯಿಲ್ಲದ ರೀತಿಯಲ್ಲಿ ಅಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತಿದೆ. ಕೆಎಸ್‌ಎಂಎಸ್‌ಸಿಎಲ್‌ ನಿಂದ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು ಮತ್ತು ಎಲ್ಲಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಒದಗಿಸಬೇಕು.

        ತಮಿಳುನಾಡು ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಮಾಡಿದಂತೆ ಔಷಧ ಖರೀದಿಯನ್ನು ಮಾಡುವಂತೆ ಗ್ರಾಹಕರ ಗುಂಪುಗಳು ಒಕ್ಕಾಲತ್ತು ಮಾಡುತ್ತಿವೆ, ಇತ್ತೀಚೆಗೆ ಮುಖ್ಯಮಂತ್ರಿಗಳು ಕೂಡ ಹಾಗೆ ಹೇಳಿದರು ಆದರೆ ಇವು ಕೇವಲ ಖಾಲಿ ಹೇಳಿಕೆಗಳಾಗಿ ಉಳಿದಿವೆ.

        ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಮಿತಿಯನ್ನು ರಚಿಸುವ ಮೂಲಕ ಕೆಎಸ್‌ಎಂಎಸ್‌ಸಿಎಲ್‌ ಅನ್ನು ಸುವ್ಯವಸ್ಥಿತಗೊಳಿಸುವ ತುರ್ತು ಅಗತ್ಯವಿದೆ.

 

ಹೀಗಾಗಿ, ಮೇಲಿನ ತಾಯಿಯ ಮರಣದ ಸಮಸ್ಯೆ  ಕೆಎಸ್‌ಎಂಎಸ್‌ಸಿಎಲ್‌ನ ಈ ವ್ಯವಸ್ಥಿತ ವೈಫಲ್ಯ ಮತ್ತು ಕರ್ತವ್ಯಲೋಪದಲ್ಲಿ ಹುದುಗಿದೆ. ಕೆಎಸ್‌ಎಂಎಸ್‌ಸಿಎಲ್ ಮತ್ತು ಔಷಧೀಯ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಕೆಎಸ್‌ಎಂಎಸ್‌ಸಿಎಲ್‌ ನಿಂದ ಔಷಧ ಸಂಗ್ರಹಣೆ ಮತ್ತು ಗುಣಮಟ್ಟ ನಿಯಂತ್ರಣದ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ಅದನ್ನು ಪಾರದರ್ಶಕವಾಗಿಸಲು ಹೆಚ್ಚಿನ ಕ್ರಮಗಳನ್ನು ಶೀಘ್ರವಾಗಿ ಜಾರಿಗೆ ತರಬೇಕಾಗಿದೆ.

 

      ಡ್ರಗ್ ಆಕ್ಷನ್ ಫೋರಮ್ - ಕರ್ನಾಟಕ (DAF-K https://daf-k.blogspot.com/) ಸ್ವತಂತ್ರ, ನೋಂದಾಯಿತ, ಲಾಭರಹಿತ ಸಂಸ್ಥೆಯಾಗಿದ್ದು, ಔಷಧಿಗಳ ತರ್ಕಬದ್ಧ ನೀತಿ ಮತ್ತು ಬಳಕೆಗಾಗಿ ಪ್ರಚಾರ ಮಾಡುತ್ತಿದೆ ಮತ್ತು 2003 ರಿಂದ ಸಕ್ರಿಯವಾಗಿದೆ. DAF-K ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್‌ವರ್ಕ್‌ನ ಭಾಗವಾಗಿದೆ (AIDAN https://aidanindia.wordpress.com/) ಮತ್ತು ಕೆಎಸ್‌ಎಂಎಸ್‌ಸಿಎಲ್‌ ಪರಿಷ್ಕರಣೆಗಾಗಿ 2008 ರಿಂದ ಕಾರ್ಯನಿರ್ವಹಿಸುತ್ತಿದೆ. ಇದು ತಮಿಳುನಾಡು (https://tnmsc.tn.gov.in/), ರಾಜಸ್ಥಾನ ಮತ್ತು ಕೇರಳದ ಔಷಧ ಸಂಗ್ರಹಣೆಯ ಮಾದರಿಯನ್ನು ವಿವರವಾಗಿ ಪರಿಶೀಲಿಸಿದೆ. DAF-K ಸದಸ್ಯರು ಕರ್ನಾಟಕ ರಾಜ್ಯ ಜ್ಞಾನ ಆಯೋಗದ (ಜ್ಞಾನ ಆಯೋಗ) "ಉಚಿತ ಔಷಧಗಳ ಲಭ್ಯತೆ" ಯ ಭಾಗವಾಗಿದ್ದರು. DAF-K ಔಷಧಿಗಳ ಲಭ್ಯತೆಯ ಕುರಿತು ಯೋಜನಾ ಆಯೋಗದ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

      ಔಷಧಿಗಳ ಲಭ್ಯತೆಗಳ ವಿಷಯ ಕುರಿತು ಈ ಅನುಭವವನ್ನು ಹೊಂದಿದ್ದರಿಂದ, ರಚನೆಯಾಗುತ್ತಿರುವ ಸಮಿತಿಯಲ್ಲಿ DAF-K ಅನ್ನು ಸೇರಿಸಲು ನಾವು ಸಲಹೆ ನೀಡುತ್ತೇವೆ.

 

ಹಲವಾರು ತಿಂಗಳುಗಳಿಂದ ಈ ಮೂಲಕ ನೊಂದಿರುವ ಎಲ್ಲ ಕುಟುಂಬಗಳನ್ನು ಗುರುತಿಸಿ ಜಿಲ್ಲೆಗಳಾದ್ಯಂತ ಸಮರ್ಪಕವಾಗಿ ಪರಿಹಾರ ನೀಡುವಂತೆ ಸಮಿತಿಗೆ ಒತ್ತಾಯಿಸುತ್ತೇವೆ.

 

ತಮ್ಮ ವಿಶ್ವಾಸಿ,

ಡಾ. ಗೋಪಾಲ ದಾಬಾಡೆ

ಡಾ. ಸ್ವಾತಿ ಎಸ್ ಬಿ

ಕರಿಬಸಪ್ಪ ಎಂ.

ಡಾ. ಶಿವಾನಂದ ಪವಾರ್

DAF-K (ಡ್ರಗ್ ಆಕ್ಷನ್ ಫೋರಮ್ - ಕರ್ನಾಟಕ)

No comments:

Post a Comment